ಪತ್ರಿಕಾ ಭವನಗಳನ್ನು ಖಾಸಗಿ ನಿಯಂತ್ರಣಕ್ಕೆ ಬಿಡುವುದಿಲ್ಲ: ಬಂಗ್ಲೆ ಮಲ್ಲಿಕಾರ್ಜುನ್ ಎಚ್ಚರಿಕೆ “ಪತ್ರಕರ್ತರ ಮಾನ್ಯತೆ ನಿರ್ಧರಿಸುವ ಅಧಿಕಾರ ಜಿಲ್ಲಾಧಿಕಾರಿಗಳಿಗೆ ಮತ್ತು RNI ಗೆ ಮಾತ್ರ”
ಶಿವಮೊಗ್ಗ : ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾರ್ವಜನಿಕ ಹಣದಿಂದ ನಿರ್ಮಿಸಲಾದ ಪತ್ರಿಕಾ ಭವನಗಳ ಮೇಲೆ ಕೆಲವು ಖಾಸಗಿ ಟ್ರಸ್ಟ್‌ಗಳು ಮತ್ತು ಸಂಘಟನೆಗಳು ನಿಯಂತ್ರಣ ಹೇರಲು ಯತ್ನಿಸುತ್ತಿರುವ ಬಗ್ಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ರಾಜ್ಯದಲ್ಲಿ ಪತ್ರಿಕಾ ಭವನಗಳ ಬಳಕೆ ಮತ್ತು ನಿರ್ವಹಣೆ ಕುರಿತ ವಿವಾದ ತೀವ್ರವಾಗುತ್ತಿರುವ ಪರಿಸ್ಥಿತಿಯಲ್ಲಿ, ಸಂಘದ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್ ಅವರು ಶಿವಮೊಗ್ಗದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಪತ್ರಿಕಾ ಭವನಗಳು ಸಾರ್ವಜನಿಕ ಮತ್ತು ಪತ್ರಕರ್ತರ ಹಕ್ಕಿನ ಸಂಸ್ಥೆಯಾಗಿದ್ದು, ಖಾಸಗಿ ಸಂಘಟನೆಗಳ ‘ಸ್ವಂತ ಆಸ್ತಿ’ಯಾಗಿ ಪರಿವರ್ತನೆಗೊಳ್ಳಲು ಅವಕಾಶವಿಲ್ಲ ಎಂದು ತಿರುಗೇಟು ನೀಡಿದರು.
ಪತ್ರಿಕಾ ಭವನಗಳಲ್ಲಿ ನೈಜ ಪತ್ರಕರ್ತರಿಗೆ ಅವಕಾಶ ಸಿಗುವಂತೆ ಮಾಡುವುದು ಸರ್ಕಾರ ಮತ್ತು ಆಡಳಿತದ ಮೊದಲ ಕರ್ತವ್ಯವಾಗಿರಬೇಕಾದರೂ, ಕೆಲವು ಖಾಸಗಿ ಟ್ರಸ್ಟ್‌ಗಳು ಅಥವಾ ಸಂಘಟನೆಗಳು ‘ನಮ್ಮ ಕಾರ್ಡ್ ಇದ್ದವರಿಗೆ ಮಾತ್ರ ಪ್ರವೇಶ’ ಎಂಬ ಅಸಾಧಾರಣ ನಿಯಮ ಜಾರಿಗೊಳಿಸಿರುವುದನ್ನು ಅವರು ಕಟುವಾಗಿ ಪ್ರಶ್ನಿಸಿದರು.
ಪತ್ರಿಕಾ ಭವನ ಪ್ರವೇಶಕ್ಕೆ ಸದಸ್ಯತ್ವ ಕಾರ್ಡ್, ನಿಯತ ಶುಲ್ಕ ಅಥವಾ ಟ್ರಸ್ಟ್ ಅನುಮತಿ ಎಂಬ ಹೊರಗಿನ ನಿಯಮಗಳನ್ನು ಜಾರಿಗೊಳಿಸುವವರಿಗೆ ತೀವ್ರ ಎಚ್ಚರಿಕೆ ನೀಡಿದ ಅವರು “ಪತ್ರಿಕಾ ಭವನ ಸಾರ್ವಜನಿಕರ ಹಣದಿಂದ ನಿರ್ಮಾಣವಾದ ಕಟ್ಟಡ. ಯಾರೊಬ್ಬರ ಆಸ್ತಿ ಅಲ್ಲ. ಸಾರ್ವಜನಿಕರ ಹಕ್ಕು ಕಿತ್ತುಕೊಳ್ಳುವುದನ್ನು ತಡೆಯಲು ಅಗತ್ಯವಿದ್ದರೆ ಹೋರಾಟ ಮಾಡಲು ನಮ್ಮ ಸಂಘಟನೆ ಸಿದ್ದವಿದೆ.” ಎಂದು ಹೇಳಿದರು.
ಕೆಲವು ಟ್ರಸ್ಟ್‌ಗಳು ಪತ್ರಿಕಾಗೋಷ್ಠಿ ನಡೆಸಲು ಸದಸ್ಯತ್ವ ಕಾರ್ಡ್ ಕಡ್ಡಾಯ, ಪ್ರವೇಶ ಶುಲ್ಕ, ಹಾಲ್ ಮತ್ತು ತಿಂಡಿಗೆ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿರುವುದನ್ನು ಅವರು ಉದಾಹರಣೆಗಳೊಂದಿಗೆ ವಿವರಿಸಿದರು.
ಬೀದರಿನ ಘಟನೆಯನ್ನು ಉಲ್ಲೇಖಿಸಿ, ಅರಣ್ಯ ಅಧಿಕಾರಿಯಿಂದ ಪತ್ರಕರ್ತನ ಮೇಲೆ ನಡೆದ ಹಲ್ಲೆಯನ್ನು ಖಂಡಿಸಲು ಪತ್ರಿಕಾಗೋಷ್ಠಿ ಮಾಡಲು ಹೋದಾಗ ರೂ.2,000 (ಹಾಲ್ ಶುಲ್ಕ) + ರೂ.5,000 (ತಿಂಡಿ ಶುಲ್ಕ) ವಸೂಲಿಯಾದ ಘಟನೆ ಅವರು ವಿವರಿಸಿದರು. “ಹಲ್ಲೆಗೆ ಒಳಗಾದ ಪತ್ರಕರ್ತರನ್ನು ರಕ್ಷಿಸಲು ಗೋಷ್ಠಿ ನಡೆಸುವಾಗಲೇ ಹಣ ಕಟ್ಟುವ ಪರಿಸ್ಥಿತಿ ಉಂಟಾಗಿದೆ. ಇದು ಪತ್ರಕರ್ತರ ಮೇಲೆ ಒತ್ತಡ ಸೃಷ್ಟಿಸುವ ಕ್ರಮ.” ಎಂದು ಅವರು ಹೇಳಿದರು.
“ನಮ್ಮಂತಹ ಪತ್ರಕರ್ತರು ಪತ್ರಿಕಾಗೋಷ್ಠಿ ನಡೆಸಲು ಸಹ ಹಣ ಕಟ್ಟಬೇಕಾದ ಪರಿಸ್ಥಿತಿ ಬಂದಿದೆ,” ಎಂದು ಅವರು ಬೇಸರ ವ್ಯಕ್ತಪಡಿಸಿದರು. ಪತ್ರಕರ್ತರ ನೈಜತೆ ಅಥವಾ ಮಾನ್ಯತೆ ನಿರ್ಧರಿಸುವ ಹಕ್ಕು RNI ಮತ್ತು ಸರ್ಕಾರದ ವಾರ್ತಾ ಇಲಾಖೆಗೂ ಮಾತ್ರ ಇದ್ದು, ಖಾಸಗಿ ಟ್ರಸ್ಟ್‌ಗಳಿಗೆ ಅಲ್ಲ ಎಂದು ಅವರು ಹೇಳಿದರು.
“ನೈಜ ಪತ್ರಕರ್ತರನ್ನು ನಿಯಂತ್ರಿಸುವ ಹಕ್ಕು ಜಿಲ್ಲಾಧಿಕಾರಿಗಳಿಗೆ ಮಾತ್ರ”
ಪತ್ರಕರ್ತರ ನೈಜತೆ ಅಥವಾ ಮಾನ್ಯತೆ ಕುರಿತು ನಿರ್ಧಾರ ಮಾಡುವ ಅಧಿಕಾರವು ಯಾವುದೇ ಖಾಸಗಿ ಟ್ರಸ್ಟ್ ಅಥವಾ ಸಂಘಟನೆಯ ಬಳಿ ಇಲ್ಲ ಎಂದು ಬಂಗ್ಲೆ ಮಲ್ಲಿಕಾರ್ಜುನ್ ಸ್ಪಷ್ಟಪಡಿಸಿದರು. ಪತ್ರಕರ್ತರ ಕೆಲಸ, ನೈತಿಕತೆ, ಮಾನ್ಯತೆ, ಪತ್ರಿಕೆಯ ರಜಿಸ್ಟ್ರೇಷನ್ ಮತ್ತು ಪರವಾನಿಗೆಯನ್ನು ಪರಿಶೀಲಿಸುವ ಅಧಿಕಾರವನ್ನು ಜಿಲ್ಲಾಧಿಕಾರಿಗಳು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು RNI (Registrar of Newspapers for India) ಗಳೇ ಹೊಂದಿರುತ್ತಾರೆ ಎಂದು ಅವರು ವಿವರಿಸಿದರು.
“ಪತ್ರಿಕೋದ್ಯಮದ ನೈಜತೆ ಪ್ರಶ್ನಿಸುವ ಅಧಿಕಾರ ಕಾನೂನಿನಿಂದ ನಿಗದಿಪಡಿಸಲಾಗಿದೆ. ಯಾರೋ ಟ್ರಸ್ಟ್ನ ಕಾರ್ಡ್ ಕೊಟ್ಟರೆ ಪತ್ರಕರ್ತ, ಕಾರ್ಡ್ ಕೊಡದಿದ್ದರೆ ಪತ್ರಕರ್ತ ಅಲ್ಲ ಎನ್ನುವುದು ಸಂಪೂರ್ಣ ಹಾಸ್ಯಾಸ್ಪದ.” — ಮಲ್ಲಿಕಾರ್ಜುನ್
ಅವರು ವಿವರಿಸುತ್ತಾ RNI ಎಂಬುದು ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಯಾಗಿದ್ದು, ದೇಶದ ಎಲ್ಲಾ ಪತ್ರಿಕೆಗಳಿಗೆ ನೋಂದಣಿ ಮತ್ತು ಪರವಾನಿಗೆ ನೀಡುವುದು ಅದರ ಕರ್ತವ್ಯ. ಪತ್ರಕರ್ತರಿಗೆ ಮಾನ್ಯತೆ ನೀಡುವ ಪ್ರಕ್ರಿಯೆಯೂ ಅಧಿಕೃತವಾಗಿದ್ದು, ಅದು ಯಾವುದೇ ಖಾಸಗಿ ಸಂಘಟನೆಗಳ ಕೈಯಲ್ಲಿಲ್ಲ. ಪತ್ರಿಕೆಯ ಸಂಚಿಕೆಗಳು, ಪ್ರಕಟಣೆಯ ನಿಯಮಿತತೆ ಮತ್ತು ಸುದ್ದಿ ವಿಷಯಗಳ ಆಧಾರದ ಮೇಲೆ ಜನರು ಪತ್ರಕರ್ತರನ್ನು ಗುರುತಿಸುತ್ತಾರೆ.
“ನಾವು ಪತ್ರಕರ್ತರೇ ಅಲ್ಲ ಎಂದಾಗಿ ಕೇಳುವ ಅಧಿಕಾರ ನಿಮ್ಮಿಗೆ ಯಾರು ಕೊಟ್ಟರು? ಪತ್ರಕರ್ತರ ನೈಜತೆಯ ಬಗ್ಗೆ ಕೇಳಬೇಕಿದ್ದರೆ ಜಿಲ್ಲಾಧಿಕಾರಿಗಳು ಕೇಳುತ್ತಾರೆ, ಸರ್ಕಾರ ಕೇಳುತ್ತದೆ, ಆದರೆ ನೀವು ಯಾರು?” ಎಂದು ಪ್ರಶ್ನೆ ಎತ್ತಿದರು.
ಅವರು ಟ್ರಸ್ಟ್‌ಗಳು, ಖಾಸಗಿ ಸಂಸ್ಥೆಗಳು ಪತ್ರಕರ್ತರ ಮೇಲೆ “ಅಧಿಕಾರ” ತೋರಿಸುವುದು ಕಾನೂನಿನಿಂದ ಮಾನ್ಯತೆ ಪಡೆದ ವ್ಯವಸ್ಥೆಯನ್ನು ಅವಮಾನಿಸುವುದು ಎಂದು ಕೂಡ ಹೇಳಿದರು. ಪತ್ರಿಕೋದ್ಯಮವು ಜನರ ಹಿತಕ್ಕಾಗಿ ಇರುವ ಸಂಸ್ಥೆಯಾದ್ದರಿಂದ, ಕೆಲವರ ವೈಯುಕ್ತಿಕ ಸ್ವಾರ್ಥಕ್ಕೆ ಅಥವಾ ನಿಯಂತ್ರಣಕ್ಕೆ ಬಲಿಯಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
“ಪ್ರೆಸ್ ಟ್ರಸ್ಟ್ ಕಾರ್ಡ್ ಯಾರಿಗೇ ಕೊಟ್ಟರೂ ಪತ್ರಕರ್ತ ಆಗುವುದಿಲ್ಲ. RNI ನೋಂದಣಿ ಮತ್ತು ಪತ್ರಿಕಾ ಸಂಚಿಕೆಗಳೇ ನೈಜ ಪತ್ರಕರ್ತರ ಗುರುತು,” ಎಂದು ಅವರು ಸ್ಪಷ್ಟಪಡಿಸಿದರು.
“ನಿಮ್ಮ ಸ್ವಂತ ಆಸ್ತಿಯಂತೆ ನಡೆದುಕೊಳ್ಳಲು ಬಯಸಿದರೆ—ಬೇರೆ ಕಟ್ಟಡ ನಿರ್ಮಿಸಿಕೊಳ್ಳಿ”
“ನಿಮ್ಮಪ್ಪನ ಮನೆ ಆಸ್ತಿಯಾಗಿದ್ರೆ ಬೇರೆ ಪತ್ರಿಕಾ ಭವನ ಕಟ್ಟಿಕೊಳ್ಳಿ. ಸಾರ್ವಜನಿಕ ಸಂಪನ್ಮೂಲವನ್ನು ಖಾಸಗಿಯಾಗಿ ಬಳಸಲು ನಿಮಗೆ ಯಾರ ಅಧಿಕಾರ ಕೊಟ್ಟಿದ್ದಾರೋ ಗೊತ್ತಾಗುತ್ತಿಲ್ಲ.”
ರಾಜ್ಯದಲ್ಲಿ ಹಲವು ವರ್ಷಗಳಿಂದ ಪತ್ರಕರ್ತರ ನಡುವೆ ಒಗ್ಗಟ್ಟಿನ ಕೊರತೆ ಇರುವುದನ್ನು ಸದುಪಯೋಗಪಡಿಸಿಕೊಂಡು, ಕೆಲವು ವ್ಯಕ್ತಿಗಳು ಮತ್ತು ಖಾಸಗಿ ಟ್ರಸ್ಟ್ಗಳು ಪತ್ರಿಕಾ ಭವನಗಳನ್ನು ತಮ್ಮ ಸ್ವಂತ ಆಸ್ತಿಯಂತೆ ಬಳಸುವ ಪ್ರಯತ್ನ ಮಾಡುತ್ತ ಬಂದಿದ್ದಾರೆ ಎಂದು ಮಲ್ಲಿಕಾರ್ಜುನ್ ಆರೋಪಿಸಿದರು. ಪತ್ರಿಕಾ ಭವನ ಎಂಬುದು ಸಾರ್ವಜನಿಕರ ತೆರಿಗೆ ಹಣ, ಸರ್ಕಾರದ ಅನುದಾನ ಮತ್ತು ಜನಪ್ರತಿನಿಧಿಗಳ ಸಹಕಾರದಿಂದ ನಿರ್ಮಾಣವಾಗಿರುವ ಸೌಲಭ್ಯವಾಗಿದ್ದು, ಅದನ್ನು ಯಾವುದೋ ವ್ಯಕ್ತಿ ಅಥವಾ ಟ್ರಸ್ಟ್ “ನಮ್ಮ ಆಸ್ತಿ” ಎಂದು ಬೋರ್ಡ್ ಹಾಕುವುದು ಸಂಪೂರ್ಣ ಕಾನೂನುಬಾಹಿರ ಮತ್ತು ಅಧಿಕಾರ ದುರುಪಯೋಗ ಎಂದು ಅವರು ಕಿಡಿಕಾರಿದರು.
“ಸರ್ಕಾರದ ಹಣದಿಂದ ಕಟ್ಟಿದ ಕಟ್ಟಡಕ್ಕೆ‘ಟ್ರಸ್ಟ್ ಆಸ್ತಿ’ಎಂದೂ ಬರೆದಿರುವುದು ಸಾರ್ವಜನಿಕ ಆಸ್ತಿಯನ್ನು ದೋಚುವ ಪ್ರಯತ್ನ. ಪತ್ರಿಕಾ ಭವನವು ಪತ್ರಕರ್ತರ ಹಕ್ಕಿನ ಜಾ— ಯಾರೊಬ್ಬರ ಖಾಸಗಿ ಸ್ವತ್ತು ಅಲ್ಲ.”
ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಟ್ರಸ್ಟ್‌ಗಳು ಪತ್ರಿಕಾ ಭವನವನ್ನು ತಮ್ಮ ಕಚೇರಿ ಅಥವಾ ನಿಯಂತ್ರಣ ಕೇಂದ್ರ ಮಾಡಿದಷ್ಟೇ ಅಲ್ಲ, ಪ್ರವೇಶಕ್ಕೆ ನಿಯಮ ನಿಗದಿಪಡಿಸಿ, ಪತ್ರಕರ್ತರಿಗೆ ಪ್ರವೇಶ ನಿರಾಕರಿಸುವ ಮಟ್ಟಕ್ಕೆ ಹೋಗಿವೆ. ಪ್ರವೇಶ ಕೊಡಲು ಕಾರ್ಡ್, ಸದಸ್ಯತ್ವ ಮತ್ತು ಶುಲ್ಕ ಎಂಬ ಹೆಸರಿನಲ್ಲಿ ಅಡ್ಡಪಥದ ನಿಯಮಗಳನ್ನು ಜಾರಿಗೊಳಿಸುವುದು ಪತ್ರಿಕೋದ್ಯಮದ ಆತ್ಮವನ್ನೇ ಹಾಳು ಮಾಡುವ ಕ್ರಮ ಎಂದು ಮಲ್ಲಿಕಾರ್ಜುನ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ಎಲ್ಲಾ ದುರ್ವ್ಯವಸ್ಥೆ ತಡೆಯುವ ಸಲುವಾಗಿ, ಪತ್ರಕರ್ತರ ಧ್ವನಿ ಸಂಘಟನೆಯಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂತಹ ಖಾಸಗಿ ಟ್ರಸ್ಟ್ ಬೋರ್ಡ್‌ಗಳನ್ನು ತೆಗೆಸುವ ಕುರಿತು ಹೈಕೋರ್ಟ್‌ನಲ್ಲಿ ದಾವೆ ದಾಖಲಿಸಲಾಗಿದೆ ಎಂದು ಅವರು ಹೇಳಿದರು.
ಒಗ್ಗಟ್ಟಿನ ಕೊರತೆಯಿಂದ ಸಮಸ್ಯೆ: ಪತ್ರಕರ್ತರಿಗೆ ಮಲ್ಲಿಕಾರ್ಜುನ್ ಕರೆ
ಪತ್ರಕರ್ತರ ನಡುವೆ ವರ್ಷಗಳಿಂದ ಒಗ್ಗಟ್ಟಿನ ಕೊರತೆ ಇರುವುದನ್ನು ಸದುಪಯೋಗಪಡಿಸಿಕೊಂಡು ಕೆಲವು ಸಂಘಟನೆಗಳು ಪತ್ರಿಕಾ ಭವನವನ್ನು ಹಿಡಿತಕ್ಕೆ ತರಲು ಪ್ರಯತ್ನಿಸುತ್ತಿವೆ ಎಂದು ಹೇಳಿದರು. “ರಾಜ್ಯದಲ್ಲಿ ಪತ್ರಕರ್ತರ ನಡುವೆ ಒಗ್ಗಟ್ಟು ಬೆಳೆಸಲು ಹೋರಾಟ ಮುಂದುವರೆಯಲಿದೆ. ಪತ್ರಿಕಾ ಭವನವು ಎಲ್ಲ ಪತ್ರಕರ್ತರಿಗೂ ಸಾಮಾನ್ಯ ವೇದಿಕೆ ಆಗಬೇಕು.”
“ಪತ್ರಿಕಾ ಭವನದ ಮೇಲೆ ಸರ್ಕಾರಿ ನಾಮಪಲಕ ಅಳವಡಿಸುವವರೆಗೂ, ಮತ್ತು ಟ್ರಸ್ಟ್ ಬೋರ್ಡ್‌ಗಳು ತೆರವುಗೊಳ್ಳುವವರೆಗೆ ನಮ್ಮ ಹೋರಾಟ ನಿಲ್ಲದು,” ಎಂದು ಅವರು ಸ್ಪಷ್ಟಪಡಿಸಿದರು.
“ರಾಜ್ಯದ ಎಲ್ಲ ಪತ್ರಿಕಾ ಭವನಗಳಲ್ಲಿ ‘ಸರ್ಕಾರಿ ಪತ್ರಿಕಾ ಭವನ’ ಎಂಬ ನಾಮಫಲಕ ಅಳವಡಿಸುವವರೆಗೂ ಹೋರಾಟ ನಿಲ್ಲದು,” ಎಂದು ಮಲ್ಲಿಕಾರ್ಜುನ್ ಘೋಷಿಸಿದರು.
ಸುದ್ದಿಗೋಷ್ಠಿಯಲ್ಲಿ ಚಿತ್ರಪ್ಪ ಯರಬಾಳ, ಕೆ.ಎಂ. ಸತೀಶ್ ಗೌಡ, ಕಮಲಾಕ್ಷ ಎಸ್.ಡಿ., ಅಣ್ಣಪ್ಪ, ಗಿರೀಶ್ ಬಿಸಿ, ನಂದನ್ ಕುಮಾರ್ ಸಿಂಗ್, ಹೆಚ್.ಎಸ್. ವಿಷ್ಣುಪ್ರಸಾದ್, ಡಿ.ಪಿ. ಅರವಿಂದ , ಮಹಮ್ಮದ್ ಫಾರೂಕ್ ಹಾಗೂ ಕಾನೂನು ಸಲಹೆಗಾರ ಷಡಾಕ್ಷರಪ್ಪ ಜಿ.ಆರ್. ಉಪಸ್ಥಿತರಿದ್ದರು.