ಹೊಸನಗರದಲ್ಲಿ ಮುಳುಗಿ ಹೋದ ಅಯಾನ್ ಕಂಪನಿ .
ಹೊಸನಗರದಲ್ಲಿ ಐಯಾನ್ ಗ್ರೂಪ್ ಎನ್ನುವ ಕಚೇರಿ ಮುಚ್ಚಿ ಹೋಗಿದೆ. ತಿಂಗಳು ತಿಂಗಳು ಸಾವಿರ ಸಾವಿರ ಕಟ್ಟುವ ಬಂಪರ್ ಬಹುಮಾನಗಳು,ಕೊನೆಯಲ್ಲಿ ಸಮಾಧಾನಕರ ಬಹುಮಾನಗಳು ಹೀಗೆ ಜನರನ್ನು ಮಂಗ ಮಾಡುವ ದಂಧೆ ಎಲ್ಲಾ ಕಡೆ ನಡೆಯುತ್ತದೆ. ಇದೇ ರೀತಿ ಹೊಸನಗರದಲ್ಲಿಯೂ ಕಳೆದ ಐದು ಆರು ತಿಂಗಳಿನಿಂದ ಸಾಕಷ್ಟು ಜನರನ್ನು ಸದಸ್ಯರನ್ನಾಗಿ ಮಾಡಿಕೊಂಡು ಸಂಸ್ಥೆ ನಡೆಸುತ್ತಿದ್ದ ಕಿಲಾಡಿಗಳಿಬ್ಬರು ಈಗ ಮಾಯವಾಗಿದ್ದಾರೆ. ಆಗಸ್ಟ್30ರೊಳಗೆ ಎಲ್ಲರಿಗೂ ಹಣ ನೀಡುತ್ತೇವೆ ನಾವು ಹಣವನ್ನ ಬೇರೆ ಕಡೆ ಲಾಭಕ್ಕಾಗಿ ಹೂಡಿಕೆ ಮಾಡಿದ್ದೇವೆ. ಅಲ್ಲಿ ಸ್ವಲ್ಪ ವ್ಯತ್ಯಾಸವಾಗಿದೆ ಸರಿ ಪಡಿಸುತ್ತೇವೆ ಎಂದು ಈಗ ಫೋನ್ ಸ್ವಿಚ್ ಆಫ್ ಆಗಿದೆ.
ಈ ಹಿಂದೆ ಇದೇ ರೀತಿ ಈ ಸ್ಟೋರ್ ಇಂಡಿಯಾ ಎನ್ನುವ ಹೆಸರಿನಲ್ಲಿ ಡೆಲ್ಲಿಯಲ್ಲಿ ಕುಳಿತು ಇಡೀ ದೇಶದಾದ್ಯಂತ ಶಾಖೆಗಳನ್ನು ತೆರೆಯುತ್ತಾ ಜನರಿಗೆ ಕಡಿಮೆ ಹಣದಲ್ಲಿ ದಿನಬಳಕೆ ವಸ್ತುಗಳನ್ನು ಕೊಡುವ ಬೇಳೆ ಕಾಳು ಅಕ್ಕಿ ಎಲ್ಲಾ ಮನೆ ಬಳಕೆಯ ವಸ್ತುಗಳನ್ನು ನೀಡುತ್ತೇನೆಂದು ಸದಸ್ಯತ್ವ ಪಡೆದು ಕೊರಗೆ ಇದ್ದಕ್ಕಿದ್ದಂತೆ ಮಾಯವಾಗಿದ್ದನ್ನು ಜನ ಮರೆಯುವ ಮುನ್ನ ಈಗ ಅಯಾನ್ ಗ್ರೂಪ್ ಸಾಕಷ್ಟು ಜನರಿಗೆ ಟೋಪಿ ಹಾಕಿ ಹೋಗಿದೆ.
ವ್ಯವಸ್ಥೆಯಲ್ಲಿ ಮೋಸ ಹೋಗುವವರು ಇರುವವರಿಗೆ ಮೋಸ ಮಾಡುವವರು ಇರುತ್ತಾರೆ ಎನ್ನುವ ಸತ್ಯ ಸಾಬೀತಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉಚ್ಚಿಲದಲ್ಲಿ ಕುಳಿತು ಕುಂದಾಪುರ ಮಂಗಳೂರು ಉಡುಪಿ ಎಲ್ಲಾ ಕಡೆ ಬ್ರಾಂಚೆಸ್ ಇದೆ ಎನ್ನುತ್ತಾ ಹೊಸನಗರದಲ್ಲಿಯೂ ಬ್ರಾಂಚ್ ಮಾಡಿ ಈಗ ಇಲ್ಲಿರುವ ಜನರಿಗೆ ಆಕಾಶ ತೋರಿಸಿದ್ದಾರೆ.
ಈ ತಿಂಗಳ ಚೀಟಿ ವ್ಯವಸ್ಥೆ ಸ್ನೇಹಿತರ ನಡುವೆ ಎನ್ನುತ್ತಾ ಸ್ನೇಹಿತನ ಸ್ನೇಹಿತನನ್ನು ಸೇರಿಸಿಕೊಳ್ಳುತ್ತಾ ಈ ಸಾರಿಯ ಅದೃಷ್ಟಶಾಲಿ ಮಂಗಳೂರಿನ ಮಹಮದ್ ಕಾರ್ಕಳದ ರಾಜೇಶ್ ಪೂಜಾರಿ ಕುಂದಾಪುರದ ರಾಜು ದೇವಾಡಿಗ ಹೀಗೆ ಹೇಳುತ್ತಾ ಭಾರಿ ಮೊತ್ತದ ಅದೃಷ್ಟದ ಬಹುಮಾನಗಳನ್ನು ಯಾರಿಗೂ ನೀಡದೆ ಕೊನೆಗೆ ಸಮಾಧಾನಕರ ಬಹುಮಾನಗಳನ್ನು ನೀಡುತ್ತಾ ಜನರ ವಿಶ್ವಾಸವನ್ನು ಗಳಿಸುತ್ತಾ ಒಂದು ದಿನ ಕೋಟ್ಯಾಂತರ ರೂಪಾಯಿ ಆದ ಕ್ಷಣ ಮಾಯವಾಗುವುದು ಎಲ್ಲಾ ಕಡೆ ನಡೆಯುತ್ತಿದೆ. ಅದೇ ರೀತಿ ಇಲ್ಲಿಯೂ ಆಗಿದೆ.
ಈ ಅದೃಷ್ಟಶಾಲಿ ಬಹುಮಾನ ಯೋಜನೆಯು ಒಂದು ಸಾವಿರ ಎರಡು ಸಾವಿರ ಐದು ಸಾವಿರ ಜನರ ಗುಂಪುಗಳ ಹೆಸರಿನಲ್ಲಿ ಒಂದಷ್ಟು ಡಮ್ಮಿ ಹೆಸರುಗಳನ್ನು ಸೇರಿಸಿಕೊಂಡು ಬಹುಮಾನ ಯೋಜನೆಯನ್ನು ಜಾರಿಗೆ ತರುತ್ತಾರೆ. ಇಲ್ಲಿ ಕಾರು ಬೈಕ್ ಚಿನ್ನ ಬಾರಿ ಬೆಲೆಯ ಬಹುಮಾನಗಳ ಆಮಿಷವಿರುತ್ತದೆ. ಆದರೆ ಆ ಎಲ್ಲಾ ಭಾರಿ ಬೆಲೆಯ ಬಹುಮಾನಗಳು ಡಮ್ಮಿ ಹೆಸರುಗಳಿಗೆ ಹೋಗುತ್ತದೆ. ಯಾರು ಸಹ ಕುಂದಾಪುರದ ರಾಜ ದೇವಾಡಿಗನು ಕಾರ್ಕಳದ ರಾಜು ಪೂಜಾರಿಯನ್ನು ಮಂಗಳೂರಿನ ಮಹಮದನನ್ನು ವಿಚಾರಿಸಲು ಹೋಗುವುದಿಲ್ಲ.ಹೋದರೆ ಅಲ್ಲಿ ಆ ವ್ಯಕ್ತಿ ಇರುವುದಿಲ್ಲ. ಕೊನೆಗೆ ಸಿಗುವುದು ಸಮಾಧಾನಕರ ಬಹುಮಾನ ಮಾತ್ರ. ಅದು ಒಂದಷ್ಟು ಸಮಯ. ಜನರ ವಿಶ್ವಾಸ ಗಳಿಸುವವರೆಗೆ ಕೊಡುತ್ತಾರೆ. ಆನಂತರ ಇದ್ದಕ್ಕಿದ್ದಂತೆ ಗಂಟು ಮೂಟೆ ಕಟ್ಟಿಕೊಂಡು ಕೋಟಿ ಕೋಟಿ ಹಣ ಗಳಿಸಿ ಮಾಯವಾಗುತ್ತಾರೆ. ಅದೇ ಇಲ್ಲಿಯೂ ಆಗಿದೆ. ಹೊಸನಗರದ ಒಂದಷ್ಟು ಜನ ವಿಶ್ವಾಸಕ್ಕೆ ಲಾಭದ ಆಸೆಗೆ ಅದೃಷ್ಟದ ಆಸೆಗೆ ಹಣ ಕಟ್ಟಿ ಈಗ ಮುಚ್ಚಿದ ಆಯಾನ್ ಗ್ರೂಪ್ ನ ಬೋರ್ಡ್ ನೋಡಿಕೊಂಡು ಪಾಪಿ ನನ ಮಗ ನಮ್ ದುಡ್ಡು ತಿಂದ್ಕೊಂಡ್ ಹೋದ ಎಂದು ಶಾಪ ಹೊಡೆಯುತ್ತಿದ್ದಾರೆ. ಪತ್ರಿಕೆ ಈ ಬಗ್ಗೆ ಅಯಾನ್ ಗ್ರೂಪ್ ನ ಮುಖಂಡನನ್ನು ಮಾತನಾಡಿಸಿದಾಗ ಆಗಸ್ಟ್ , 30ನೇ ತಾರೀಕಿನೊಳಗೆ ಎಲ್ಲ ಕ್ಲಿಯರ್ ಮಾಡ್ತೇನೆ ಎಂದವರು ಈಗ ಫೋನ್ ಸ್ವಿಚ್ ಆಫ್ ಮಾಡಿದ್ದಾರೆ. ನಂಬಿಕೆಟ್ಟವರಿಲ್ಲ ಜಗದೊಳಗೆ ನಂಬಿಕೆ ಇಲ್ಲದ ಮನುಷ್ಯರ ನಡುವೆ ನಂಬುವ ಹುಂಬನ ಕಂಡೆ ನಾ ಕಂಡೆ ಎನ್ನುವಂತಾಗಿದೆ ಹೊಸನಗರದ ಕೆಲವರು ಪರಿಸ್ಥಿತಿ.