ರೈತರನ್ನು ಹೋರಾಟಕ್ಕಿಳಿಸಿದ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಯ ಎಡವಟ್ಟುಗಳು

ರೈತರನ್ನು ಹೋರಾಟಕ್ಕಿಳಿಸಿದ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಯ ಎಡವಟ್ಟುಗಳು

ಕಳೆದ ಒಂದು ವರ್ಷಗಳಿಂದ ನಿರಂತರವಾಗಿ ಶಿವಮೊಗ್ಗ ಜಿಲ್ಲೆಯಾದ್ಯಂತ ರೈತರ ಹೋರಾಟಗಳು ತಾಲೂಕು ಕೇಂದ್ರದಿಂದ  ಜಿಲ್ಲಾ ಕೇಂದ್ರದ ವರೆಗೆ ಎಲ್ಲಾ ತಾಲೂಕುಗಳಲ್ಲೂ ನಡೆಯುತ್ತಾ ಬಂದಿದೆ. ಇತ್ತೀಚಿಗೆ ಹೋಬಳಿ ಮಟ್ಟದಲ್ಲಿ ಹೋರಾಟಗಳು ನಡೆಯುತ್ತಿದೆ. ಕಾರಣ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಗಳ ಸಮನ್ವಯತೆ ಇಲ್ಲದೆ, ಭ್ರಷ್ಟಾಚಾರದ ಮೂಲಕ ಭೂಮಿ ಹಂಚಿಕೆ ಮಾಡಿದ ಅಧಿಕಾರಿಗಳ ಎಡವಟ್ಟುಗಳು ರೈತರನ್ನು ಈಗ ಕೋರ್ಟಿಗೆ ಅಲೆಯುವಂತೆ ಮಾಡುತ್ತಿದ್ದಾರೆ. ಅಧಿಕಾರಿಗಳು ಏಕಕಾಲಕ್ಕೆ ನೋಟಿಸು ನೀಡಿದೇ, ಅಲ್ಲಲ್ಲಿ ಕೆಲವು ಅಷ್ಟು ಜನರಿಗೆ ನೋಟಿಸ್ ನೀಡುತ್ತಾ, ರೈತರನ್ನು ಬೀದಿಗೆ ತಳ್ಳುತ್ತಿದ್ದಾರೆ. ಅದರ ಅಂಗವಾಗಿ ೧೩ನೇ ತಾರೀಕು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ತುಂಗಭದ್ರಾ ಯೋಜನೆ ನಿರಾಶ್ರಿತರ ಭೂಮಿ ಹಕ್ಕು ಹೋರಾಟ ನಡೆಯಿತು.



ಮುಖ್ಯವಾಗಿ ಭದ್ರಾವತಿ ತಾಲೂಕು ಹಾಲ ಲಕ್ಕವಳ್ಳಿ ಗ್ರಾಮದಲ್ಲಿ ೧೪೦ಕ್ಕೂ ಹೆಚ್ಚು ಕ್ಕೂ ಹೆಚ್ಚು ಜನರಿಗೆ ಏಕಕಾಲಕ್ಕೆ ಅರಣ್ಯ ಇಲಾಖೆ ನೋಟಿಸು ನೀಡಿ ಕಂದಾಯ ಇಲಾಖೆಯವರು ಹಂಚಿಕೆ ಮಾಡಿದ ಭೂಮಿ ತಮ್ಮ ಇಲಾಖೆಗೆ ಸಂಬAಧಪಟ್ಟದೆAದು ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಕೇಸು ವಿಚಾರ ದಿನಾಂಕ ತಿಳಿಸಿ ನೋಟಿಸ್ ನೀಡಿದ್ದು, ರೈತರು ಅಂದಿಗೆ ಬೆಂಕಿ ಬಿದ್ದಂತೆ ಹೋರಾಟಕ್ಕೆ ಸಿದ್ದರಾಗಿ, ಬ್ಯಾರಿಕೆಡ್ ಮುರಿದು ತಮ್ಮ ಕಿಚ್ಚನ್ನು ತೋರಿಸಲು ಪ್ರಾರಂಭಿಸಿದರು.

ಈ ಹೋರಾಟದ ಹಿಂದೆ ಅನೇಕ ವಿಷಯಗಳನ್ನು ತಿಳಿದುಕೊಳ್ಳಬೇಕಾಗಿದೆ ರೈತರಿಗೆ ಇದರ ಮಾಹಿತಿಯೇ ಇಲ್ಲ. ಭೂ ಕಂದಾಯ ಅಧಿನಿಯಮ ೧೯೬೬ ನಿಯಮ ೧೦೮ (ಕೆ) ಅನ್ವಯ ರದ್ದುಪಡಿಸುವ ಬಗ್ಗೆ ನೋಟಿಸು ನೀಡಿದ ಕಂದಾಯ ಇಲಾಖೆ ಅರಣ್ಯ ಇಲಾಖೆಯ ಜೀತ ದಾಳಿನಂತೆ ಕೆಲಸ ಮಾಡುತ್ತದೆ. ರೈತರಿಗೆ ಭೂಮಿ ಹಂಚುವಾಗ ಅರಣ್ಯ ಇಲಾಖೆಯ ಅಭಿಪ್ರಾಯವನ್ನು ತೆಗೆದುಕೊಳ್ಳಬೇಕು ಎನ್ನುವುದು ಒಂದು ನಿಯಮ .ಆದರೆ ಆರ್ ಟಿ ಸಿ ಯಲ್ಲಿ ಅರಣ್ಯ ವೆನ್ನುವುದನ್ನು ನಮೂದಿಸದೆ ಕಂದಾಯ ಭೂಮಿಯಾಗಿದ್ದಲ್ಲಿ ಅರಣ್ಯ ಇಲಾಖೆಯ ಅನುಮತಿ ಪಡೆಯದೆ ಹಂಚಿಕೆ ಮಾಡಬಹುದಾಗಿತ್ತು. ಅದನ್ನೇ ಕಂದಾಯ ಇಲಾಖೆ ಮಾಡುತ್ತಾ ಬಂದಿದೆ. ಈಗ ಆ ಎಲ್ಲಾ ಭೂಮಿಗಳನ್ನು ಅರಣ್ಯ ಇಲಾಖೆ ತನ್ನ ವ್ಯಾಪ್ತಿಯೊಳಗೆ ಇದೆ ಎನ್ನುತ್ತಿದ್ದಾರೆ. ಯಾವುದು ಬ್ರಿಟಿಷಕಾಲದ ನೋಟಿಫಿಕೇಶನ್ಗಳನ್ನು ಈಗ ಜಾರಿಗೆ ತರುತ್ತಿರುವುದು ಅರಣ್ಯ ಇಲಾಖೆಯ ದೌರ್ಜನ್ಯ. ಇದನ್ನು ಕಂದಾಯ ಇಲಾಖೆ ಖಡಕ್ಕಾಗಿ ಅರಣ್ಯ ಇಲಾಖೆಗೆ ತಿಳಿಸಬೇಕಾಗಿದೆ. ಈ ಕೆಲಸವನ್ನು ಕಂದಾಯ ಇಲಾಖೆ ಮಾಡುತ್ತಿಲ್ಲ. ಇದರೊಂದಿಗೆ ಜನಪ್ರತಿನಿಧಿಗಳು ಜನರು ಸಮಸ್ಯೆಯಲ್ಲಿದ್ದರೆ ಮಾತ್ರ ನಾವು ವೋಟು ಕೇಳಬಹುದು ಎನ್ನುವ ಮನಸ್ಥಿತಿಯಲ್ಲಿ ತಾತ್ಕಾಲಿಕ ಉಪಶಮನವನ್ನು ಹೇಳುತ್ತಾ, ಶಾಶ್ವತ ಪರಿಹಾರ ಮಾರ್ಗಗಳನ್ನು ಕಾನೂನುಗಳನ್ನು ಜಾರಿಗೆ ತರುತ್ತಿಲ್ಲ. ಇದರ ಪರಿಣಾಮ ಪ್ರತಿ ಹಳ್ಳಿಗಳಲ್ಲೂ ರೈತರು ಹೋರಾಟಕ್ಕಿಳಿಯಬೇಕಾದ ಸನ್ನಿವೇಶ ನಿರ್ಮಾಣ ಆಗಿದೆ. ಈ ರೈತರಿಗೆ ನೆನಪಿನ ಶಕ್ತಿ ಕಡಿಮೆ ಇದೆಯೋ ಗೊತ್ತಿಲ್ಲ ಚುನಾವಣೆ ಬಂದಾಗ ಮತ್ತೆ ಅದೇ ರಾಜಕಾರಣಿಗಳನ್ನ ಓಲೈಸುತ್ತಾ ಮತ ಹಾಕುತ್ತಾರೆ. ಆಗಿರುವ ಅನ್ಯಾಯವನ್ನು ಸರಿಪಡಿಸಲಾಗದ ಶಾಸಕರನ್ನು ಪ್ರಶ್ನೆ ಮಾಡುವ ಒಗ್ಗಟ್ಟು ರೈತರಲ್ಲಿ ಇಲ್ಲವಾಗಿದೆ. ಈ ದೌರ್ಬಲ್ಯವನ್ನು ಮನಗಂಡೇ ರಾಜಕಾರಣಿಗಳು ಮತ್ತು ಅಧಿಕಾರಿಗಳು ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಇದು ಹೀಗೆ ಮುಂದುವರೆದರೆ ದೆಹಲಿಯಲ್ಲಿ ಪೊರಕೆ ಮೂಲೆ ಸೇರಿದರೆ , ಕರ್ನಾಟಕದಲ್ಲಿ ರೈತರ ಮನೆಮನೆಗಳಲ್ಲಿ ಪೊರಕೆ ಮನೆಯ ಮುಂಭಾಗದಲ್ಲಿ ತೂಗು ಹಾಕಬೇಕಾಗುತ್ತದೆ.

ಆ ಕೆಲಸವನ್ನು ರೈತರು ಮಾಡಲು ಒಗ್ಗಟ್ಟಾಗಬೇಕಾದ ಅಗತ್ಯವಿದೆ. 

* ಶಿವಮೊಗ್ಗ ತಾಲ್ಲೂಕು ನಿಧಿಗೆ ಹೋಬಳಿ ಹಾಲಲಕ್ಕವಳ್ಳಿ ಗ್ರಾಮ, ಲಕ್ಕಿನಕೊಪ್ಪ, ತೋಟದಕೆರೆ, ಹುರಳಿಹಳ್ಳಿ ಗ್ರಾಮಗಳು ೧೯೫೧ರ ತುಂಗಾ ಹಾಗೂ ೧೯೫೬ರ ಭದ್ರ ಅಣೆಕಟ್ಟು ನಿರ್ಮಿತ ಸಂದರ್ಭದಲ್ಲಿನ ಮುಳುಗಡೆ ಸಂತ್ರಸ್ತರಿಗೆ ಮತ್ತು ಭೂಹೀನರಿಗೆ ಪುನರ್ವಸತಿ ಗ್ರಾಮ ಎಂದು ನಿರ್ಮಿಸಲಾಗಿರುತ್ತದೆ. 

* ಶಿವಮೊಗ್ಗ ಜಿಲ್ಲೆಯಲ್ಲಿಯೇ ಅತ್ಯಂತ ಹಳೆಯ ಅಣೆಕಟ್ಟು ಇದಾಗಿದ್ದು, ಈ ಅಣೆಕಟ್ಟಿನಿಂದ ಸಂಗ್ರಹವಾದ ನೀರು ದೂರದ ಆಂಧ್ರ ಪ್ರದೇಶ ರಾಜ್ಯದ ರಾಯಲಸೀಮೆಯವರೆಗೂ ಹರಿಯುತ್ತಿದ್ದು, ಅಂತೆಯೇ ಭದ್ರಾ ನೀರು ಲಕ್ಷಾಂತರ ಎಕರೆ ಕೃಷಿ ಜಮೀನಿಗೆ ಹಾಗೂ ಬಯಲುಸೀಮೆ ಜಿಲ್ಲೆಗಳಿಗೆ ಸರಬರಾಜಾಗುತ್ತಿದ್ದು, ಇಲ್ಲೇ ಅಣೆಕಟ್ಟಿನ ಹಿನ್ನೀರಿನಲ್ಲಿ ಸಂತ್ರಸ್ಥರಾದ ಜನರ ಹಿತಾಸಕ್ತಿಯನ್ನು ಇಲ್ಲಿನ ಸರ್ಕಾರಗಳೇ ನಿರ್ಲಕ್ಷಿಸುತ್ತಿವೆ. 

* ೧೯೫೧ ರ ತುಂಗಾ ಅಣೆಕಟ್ಟು ಯೋಜನಾ ವರದಿಯಲ್ಲಿ ಹಾಲಲಕ್ಕವಳ್ಳಿಯ ಸರ್ವೆ ನಂ.೧೮, ೧೯, ೨೦ ಮುಳುಗಡೆ ಸಂತ್ರಸ್ಥರಿಗೆ ಮತ್ತು ಭೂಹೀನರಿಗೆ ಭೂಮಿ ಮಂಜೂರಾತಿ, ಗ್ರಾಮ ನಿರ್ಮಾಣ, ದೇವಸ್ಥಾನ, ಶಾಲೆ, ಪ್ರಾಥಮಿಕ ಚಿಕಿತ್ಸಾ ಕೇಂದ್ರ ನಿರ್ಮಿಸಲು ಪ್ರಸ್ತಾಪಿಸಲಾಗಿದೆ. ೧೯೫೧ ರಿಂದಲೂ ಅಣೆಕಟ್ಟು ನಿರ್ಮಾಣದ ಸಂದರ್ಭದಲ್ಲಿ ಹಾಲಲಕ್ಕವಳ್ಳಿಯಲ್ಲಿ ಸುಮಾರು ೬೯೦ ಎಕರೆ ತರಿ ಮತ್ತು ಖುಷಿ ಜಮೀನು ಕಂದಾಯ ಇಲಾಖೆಯಿಂದ ಈ ಕಾರಣದಿಂದಲೇ ಮಂಜೂರಾತಿ ನೀಡಲಾಗಿದೆ.

* ತುಂಗಾ ಬಲದಂಡೆ ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚಿನ ಪ್ರದೇಶವನ್ನು ನೀರಾವರಿಗೆ ಮಂಜೂರು ನೀಡಲಾಗಿದೆ. ೧೯೫೧ರಿಂದಲೂ ಮಂಜೂರಾತಿ ಆಗಿದ್ದು ಕೆಲವು ಜಮೀನುಗಳಿಗೆ ಪಕ್ಕಾಸೋಡು ದುರಸ್ತಿ ಆಗಿದೆ.

* ೧೯೮೦ರ ಹೊಸ ಅರಣ್ಯ ಕಾಯ್ದೆ ಜಾರಿಗಿಂತಲೂ ಮುಂಚಿತ ಈ ಜಮೀನುಗಳು ಮಂಜೂರಾಗಿದೆ ಈಗ ಅರಣ್ಯ ಇಲಾಖೆಯವರು ಅರ್ಧ ಎಕರೆ ಯಿಂದ ೩ ಎಕರೆ ಜಮೀನು ಹೊಂದಿದವರಿಗೂ, ಪಕ್ಕಾಫೋಡು ಆದವರಿಗೂ ಎ.ಸಿ ಕೋರ್ಟ್ನಲ್ಲಿ ಮೂಲ ಮಂಜೂರಾತಿ ರದ್ದುಗೊಳಿಸಲು ವ್ಯಾಜ್ಯ ಹೂಡಿರುತ್ತಾರೆ.

* ಕರ್ನಾಟಕ ಸರ್ಕಾರದ ಅರಣ್ಯ ಮಂತ್ರಿಗಳಿಗೆ, ಶಿವಮೊಗ್ಗ ಸಿಸಿಎಫ್ ಕಛೇರಿಗೆ ಹಾಗೂ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಡಿ-ನೋಟಿಫಿಕೇಶನ್ ಪ್ರಸ್ತಾವನೆಗೆ ಕೋಟಿ ಸಲ್ಲಿಸಿದ ಅರ್ಜಿ ಪರಿಶೀಲನಾ ಉದ್ದೇಶ ಪೂರ್ವಕವಾಗಿ ನಿರ್ಲಕ್ಷ್ಯ ಹಂತದಲ್ಲಿದೆ. ಮಾಡಿದ್ದು, ಡಿ-ನೋಟಿಫಿಕೇಶನ್ ಬಗ್ಗೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.

* ಸುಮಾರು ೬೦-೭೦ ವರ್ಷಗಳಿಂದ ಕಂದಾಯ ಇಲಾಖೆಯಿಂದಲೇ ಮಂಜೂರಾತಿ ನೀಡಿದ ಜಮೀನು ಸಾಗುವಳಿ ಪತ್ರ, ಮನೆ ಹಕ್ಕುಪತ್ರ, ಪುನರ್ವಸತಿ ಸೌಕರ್ಯ ಮುಂತಾದುವುಗಳನ್ನು ಸಮರ್ಥಿಸಿಕೊಳ್ಳಲು ಕಂದಾಯ ಇಲಾ -ಖೆಯು ಮುಂದೆ ಬರದ ಕಾರಣ, ಈ ಚಳುವಳಿಯನ್ನು  ಪಕ್ಷಾತೀತವಾಗಿ ಹಮ್ಮಿಕೊಂಡಿದ್ದು, ಕಂಗಾಲಾಗಿರುವ ಅಸಹಾಯಕ ರೈತರಿಗೆ ಪರಸ್ಪರ ಸೈರ್ಯ ನೀಡಲು ನೈತಿಕ ಬೆಂಬಲ ಕೋರಿದೆ.

                                                                 : ಹಕ್ಕೊತ್ತಾಯ :

ರಾಜ್ಯ ಸರ್ಕಾರ ಹಾಲಲಕ್ಕವಳ್ಳಿ ಗ್ರಾಮ ಸರ್ವೆ ನಂ.೧೮,೧೯ ಮತ್ತು ೨೦ ರ ಡಿ-ನೋಟಿಫಿಕೇಶನ್ ಮತ್ತು ಡಿ-ರಿಸರ್ವ್ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮತ್ತು ಕಂದಾಯ ಇಲಾಖೆಯ ವತಿಯಿಂದ ಅರಣ್ಯ ಇಲಾಖೆಗೆ ಪ್ರಸ್ತಾವನೆ ಕಳಿಸಲು ಆಡಳಿತಾತ್ಮಕ   ವ್ಯವಸ್ಥೆಯನ್ನು ಕಾಲಮಿತಿಯಲ್ಲಿ ಕೈಗೊಳ್ಳಲು ಕೋರಿದೆ

ಶಿವಮೊಗ್ಗ ಜಿಲ್ಲೆಯಲ್ಲಿಯೇ ಹೆಚ್ಚಿನ ಒತ್ತುವರಿ ಪ್ರಕರಣ ಇದೆ ಎಂದು ಅರಣ್ಯ ಇಲಾಖೆಯವರು ಹೇಳುತ್ತಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಅಂದರೆ ೭ ಅಣೆಕಟ್ಟುಗಳು ನಿರ್ಮಾಣವಾಗಿದ್ದು, ಪುನವರ್ಸತಿ ಮತ್ತು ಅರಣ್ಯದಿಂದ ಭೂಮಿ ಬಿಡುಗಡೆ ಬಗ್ಗೆ ರಾಜ್ಯ ಸರ್ಕಾರವು ಚಕಾರವೆತ್ತದೆ ಇರುವುದು ಸೋಜಿಗವಾಗಿದ್ದು, ಹಾಲಲಕ್ಕವಳ್ಳಿ ಗ್ರಾಮದ ಸರ್ವೆ ನಂ.೧೮,೧೯ ಮತ್ತು ೨೦ ರ ಭೂಮಿಯನ್ನು ತುಂಗಾ ಅಣೆಕಟ್ಟು ನಿರಾಶ್ರಿತರ ಮತ್ತು ಭೂಹೀನರಿಗೆ ಮಂಜೂರಾತಿ ಎಂಬ ವಿಶೇಷ ಪ್ರಕರಣವೆಂದು ಪರಿಗಣಿಸಿ ಈ ಜಮೀನುಗಳಿಗೆ ಡಿ ನೋಟಿಫಿಕೇಶನ್ ಮಾಡಿಕೊಡಲು ಮತ್ತು ಎ.ಸಿ.ಎಫ್ ಮತ್ತು ಎ.ಸಿ ಕೋರ್ಟ್ನಲ್ಲಿ ಅರಣ್ಯ ಇಲಾಖೆ ವತಿಯಿಂದ ವಾಜ್ಯ ಹೂಡುವುದನ್ನು ನಿಲ್ಲಿಸಲು ಹಾಗೂ ಈಗ ಹೂಡಿರುವ ವಾಜ್ಯಗಳನ್ನು, ನೀಡಲಾದ ನೋಟೀಸುಗಳನ್ನು ಹಿಂಪಡೆಯಲು ಆಗ್ರಹಿಸಿದೆ.

ಹಾಲಲಕ್ಕವಳ್ಳಿ ಗ್ರಾಮವನ್ನು ಪುನವರ್ಸತಿ ಗ್ರಾಮವೆಂದು ಅಧಿಕೃತವಾಗಿ ಘೋಷಿಸಿ ಯೋಜನೆಯಿಂದ ಬಾಧಿತರೆಂದು ಪರಿಗಣಿಸಿ ಸರ್ಕಾರವು ಅಗತ್ಯ ಮೂಲಭೂತ ಸೌಕರ್ಯ ನೀಡಲು, ಅಭಿವೃದ್ಧಿ ಕಾರ್ಯದಲ್ಲಿ ಆದ್ಯತೆಯ ಮೇರೆಗೆ ಪರಿಗಣಿಸಲು ಮತ್ತು ಮುಳುಗಡೆ ಸಂತ್ರಸ್ಥ ಕುಟುಂಬಗಳಿಗೆ ಯೋಜನಾ ಭಾಧಿತ ಕುಟುಂಬ ಪ್ರಮಾಣ ಪತ್ರ ನೀಡಲು ಕೋರಿದೆ. ಈಗಾಗಲೇ ವಿವಿಧ ನ್ಯಾಯಾಲಯಗಳಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆಯ ಭೂಮಿಯ ಒಡೆತನದ ಬಗ್ಗೆ ವ್ಯಾಜ್ಯಗಳು ನಡೆಯುತ್ತಿರುವುದರಿಂದ ಮತ್ತು ಇತ್ತೀಚಿನ ವನ ಸಂರಕ್ಷಣಾ ಅಧಿನಿಯಮ, ೨೦೨೩ ಯನ್ನು ರಾಜ್ಯ ಸರ್ಕಾರವು ಇನ್ನೂ ಜಾರಿಗೆ ತರದ ಕಾರಣ, ಈ ಎಲ್ಲಾ ನ್ಯಾಯಾಲಯ ಪ್ರಕ್ರಿಯೆಗಳು ಮುಗಿಯುವವರೆಗೆ ರೈತರಿಗೆ ನೀಡಿರುವ ನೋಟೀಸನ್ನು ಹಿಂಪಡೆಯಲು  ಒತ್ತಾಯಿಸುತ್ತೇವೆ.

ಹಾಲಲಕ್ಕವಳ್ಳಿ ಗ್ರಾಮ, ಲಕ್ಕಿನಕೊಪ್ಪ, ತೋಟದ ಕೆರೆ, ಹುರಳಿಹಳ್ಳಿ ಗ್ರಾಮಗಳು ಪುನರ್ವಸತಿ ಗ್ರಾಮಗಳು ಎಂದು ಸ್ಪಷ್ಟವಾಗಿ ಸರ್ಕಾರದ ವಿವಿಧ ಇಲಾಖೆಗಳ ದಾಖಲೆಗಳಲ್ಲಿ ನಮೂದಿಸಿದ್ದಾಗ್ಯೂ ಸಹ ಕಾಲ ಕಾಲಕ್ಕೆ ಕೈಗೊಳ್ಳಬೇಕಾದ ಡಿ-ನೋಟಿಫಿಕೇಶನ್ ಕ್ರಮವನ್ನು ನಿರ್ಲಕ್ಷ್ಯತನದಿಂದ ಕೈಬಿಟ್ಟ ಕಾರಣ ಅರಣ್ಯ ಇಲಾಖೆಯು ತನ್ನ ಜಾಗವೆಂದು ಪ್ರತಿಪಾದಿಸುತ್ತಿದೆ. ಈ ಕ್ರಮ ಸರ್ವಥಾ ಖಂಡನೀಯ.

ಚೋರನಡೇಹಳ್ಳಿ ರಾಜ್ಯ ಅರಣ್ಯ ಪ್ರದೇಶವನ್ನು ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಗೆ ತರುವುದಾಗಲೀ ಅಥವಾ ಭದ್ರಾ ಅಭಯಾರಣ್ಯ ಪ್ರದೇಶಕ್ಕೆ ಯಾ ಬಫರ್‌ಜೋನ್ ಪ್ರದೇಶಕ್ಕೆ ಸೇರಿಸಬಾರದೆಂದು ಪದೇ ಪದೇ ಅರಣ್ಯ ಇಲಾಖೆಗೆ ಪಂಚಾಯತ್ ಹಾಗೂ ಸಾರ್ವಜನಿಕ ಸಭೆಗಳಲ್ಲಿ ಠರಾವು ಮಂಡಿಸಿದ್ದಾಗ್ಯೂ ಸಹ ಅದನ್ನು ಮರೆಮಾಚಿ ರಾಜ್ಯ ವನ್ಯ ಜೀವಿ ಮಂಡಳಿಗೆ ಅರಣ್ಯ ಇಲಾಖೆಯು ತನಗೆ ಪೂರಕವಾದ ವರದಿ ಸಲ್ಲಿಸುತ್ತಿರುವ ಕ್ರಮವನ್ನು ಆಕ್ಷೇಪಿಸಿ ಖಂಡಿಸುತ್ತಾ, ಯಾವುದೇ ಅಭಯಾರಣ್ಯ ಮತ್ತು ಬಫರ್‌ಜೋನ್ ವ್ಯಾಪ್ತಿಯಿಂದ ಹೊರಗಿಡಲು ಈ ಭಾಗದ ಜನರ ಅಭಿಪ್ರಾಯವನ್ನು ಸಹ ಈ ಕರ ಪತ್ರದ ಮೂಲಕ ಸಲ್ಲಿಸಲಾಗುತ್ತಿದೆ.


Post a Comment

Previous Post Next Post