ಧರ್ಮಸ್ಥಳದಲ್ಲಿ ಪಾಪದ ಕೊಡ- ಸತ್ಯ ಮಿಥ್ಯ ನಂಬಿಕೆ ಬೇರುಗಳು.
ಧರ್ಮಸ್ಥಳದಲ್ಲಿ ಪಾಪದ ಕೊಡ- ಸತ್ಯ ಮಿಥ್ಯ ನಂಬಿಕೆ ಬೇರುಗಳು. ಧರ್ಮಸ್ಥಳ ಎಂದರೆ ಹಿಂದುಗಳ ನಂಬಿಕೆಯ ಧಾರ್ಮಿಕ ಕ್ಷೇತ್ರವಾಗಿತ್ತು. ಆದರೆ ಈಗ ಭುಗಿಲೆದ್ದ ವಾತಾವರಣದಲ್ಲಿ ಧರ್ಮ ದೇವರು ಅಪನಂಬಿಕೆಗಳು, ಪರ ವಿರೋಧಗಳ ಜಟಾಪಟಿ ಶುರುವಾಗಿದೆ. ಒಂದು ಆಡಳಿತ ವ್ಯವಸ್ಥೆಯಲ್ಲಿ ಒಂದಷ್ಟು ಲೋಪದೋಷಗಳು ಇರುವುದು ಸಹಜ. ಅದನ್ನು ವೀರೇಂದ್ರ ಹೆಗಡೆ ಮಾಡಲಿ, ಇನ್ಯಾರೇ ಮಾಡಲಿ ಆಗಿಯೇ ಆಗಿರುತ್ತದೆ. ಆದರೆ ಇಲ್ಲಿ ದೇವರು ಧರ್ಮ ದ ಮೂಲವನ್ನೇ ಆಲಗಿಸುವ ಕೆಲಸ ಆಗುತ್ತಿದೆ ಎಂದು ಒಂದು ವರ್ಗ ಆರೋಪಿಸುತ್ತದೆ.
ಮೊದಲು ನಾವು ಅರ್ಥ ಮಾಡಿಕೊಳ್ಳ ಬೇಕಾಗಿದ್ದು ಧರ್ಮದ ಮೂಲವನ್ನು. ಧರ್ಮದ ಮೂಲದಲ್ಲಿ ನಂಬಿಕೆಯೇ ದೇವರು. ಯಾವುದೇ ಕ್ಷೇತ್ರದಲ್ಲಿ ಇರಬಹುದು, ದೇವಸ್ಥಾನದಲ್ಲಿ ಇರಬಹುದು, ಮಸೀದಿ ಇರಬಹುದು, ಚರ್ಚ್ ಇರಬಹುದು, ಎಲ್ಲಾ ಕಡೆಯೂ ಮನುಷ್ಯರು ಇರುತ್ತಾರೆ. ಮನುಷ್ಯ ಭಾವನಾತ್ಮಕವಾಗಿ ಆಸೆ ಆಕಾಂಕ್ಷೆ, ಸ್ವಹಿತಾಸಕ್ತಿ ಗಳೊಂದಿಗೆ ಕಾಮ ಕ್ರೋಧಾದಿಗಳನ್ನು ಹೊಂದಿದವರು ಕೆಲಸ ಮಾಡುತ್ತಿರುತ್ತಾರೆ. ಇಲ್ಲಿ ಯಾರು ಸಹ ದೇವರಲ್ಲ. ದೇವರ ಹೆಸರಿನಲ್ಲಿ ಬದುಕುತ್ತಿರುವ ಮನುಷ್ಯರು. ಮನುಷ್ಯ ಎಂದಾದ ಮೇಲೆ ಪರಿಪೂರ್ಣತೆ ಇರುವುದಿಲ್ಲ. ಶ್ರೀರಾಮಚಂದ್ರನಿಂದ ಹಿಡಿದು ಕೃಷ್ಣ , ಚಾರಿತ್ರಿಕವಾಗಿ ಬಸವಣ್ಣ ಗುರುನಾನಕ್, ಪೈಗಂಬರ್, ಯೇಸು, ಎಲ್ಲರನ್ನೂ ಪ್ರಶ್ನಿಸುವ ಧರ್ಮದ ಸರಿ ತಪ್ಪುಗಳನ್ನು ವಿಮರ್ಶೆಗೆ ಒಳಪಡಿಸುವ ಅಗತ್ಯತೆ ಸಮಾಜಕ್ಕಿದೆ. ಯಾವ ಸಮಾಜ ಪ್ರಶ್ನಿಸುವುದಿಲ್ಲವೋ ಅದು ನಿಂತ ನೀರಾಗುತ್ತದೆ. ಆಗ ಧಾರ್ಮಿಕತೆ ಭ್ರಷ್ಟವಾಗುತ್ತದೆ. ಹಿಂದೂ ಧರ್ಮ ಆ ನಿಟ್ಟಿನಲ್ಲಿ ಸದಾಕಾಲ ತನ್ನ ಒಡಲೊಳಗೆ ಪ್ರಶ್ನಿಸುವ ಮನಸುಗಳನ್ನು ಜಾಗೃತ ಮಾಡುತ್ತಾ ಬಂದಿದೆ. ಮೌಡ್ಯದ ವಿರುದ್ಧ ಚಾರ್ವಾಕನಂತವರು ಪ್ರಶ್ನಿಸಿದ್ದನ್ನು ಕಥೆಗಳಲ್ಲಿ ನೋಡಬಹುದು.
ಆದರೆ ಇತ್ತೀಚಿಗಿನ ವಾತಾವರಣ ಧಾರ್ಮಿಕತೆಗೆ ಹೊಸ ಆಯಾಮಗಳನ್ನು ನೀಡುತ್ತದೆ. ಒಂದು ಧರ್ಮದ ಬಗ್ಗೆ ಇನ್ನೊಂದು ಧರ್ಮದವರು ಟೀಕೆ ಮಾಡುವುದು ಅಪರಾಧ ಎನ್ನುವಂತೆ ಆಗಿದೆ. ಪ್ರಪಂಚದಲ್ಲಿರುವ ಎಲ್ಲಾ ಧರ್ಮಗಳು ಒಂದೊಂದು ಕಾಲಘಟ್ಟದಲ್ಲಿ ಹುಟ್ಟಿದ್ದಾರೆ. ಆ ಕಾಲಘಟ್ಟದಲ್ಲಿ ಸಮಾಜದಲ್ಲಿದ್ದ ಅವ್ಯವಸ್ಥೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ನಿಯಮಗಳನ್ನು ರೂಪಿಸಿದ್ದೆ ಧರ್ಮ ಎನಿಸಿಕೊಂಡಿದೆ. ತರ್ಮ ಎಂದರೆ ಸಾಮಾಜಿಕವಾಗಿ ನಡೆದುಕೊಳ್ಳುವ ರೀತಿ ನೀತಿಗಳು. ಅದು ಯಾವುದೋ ಕಾಲಘಟ್ಟದಲ್ಲಿ ಬರೆದಿರುವುದನ್ನು ಬದಲಾಯಿಸದೆ ಸದಾಕಾಲ ಮುಂದುವರಿಸ್ಕೊಂಡು ಹೋಗೋದು, ಅದರಲ್ಲಿ ಕಾಲಕಾಲಕ್ಕೆಬದಲಾವಣೆಗಳನ್ನು ತಾರದೆ ಇರುವುದು ಧಾರ್ಮಿಕ ಮೌಢ್ಯ ಎನಿಸಿಕೊಳ್ಳುತ್ತದೆ. ಹಿಂದಿನ ಕಾಲದಲ್ಲಿ ಬಸವಣ್ಣನವರ ಕಾಲಘಟ್ಟದವರೆಗೂ ದ್ವೈತ ಅದ್ವೈತ ಸಿದ್ದಾಂತದ ಸಂದರ್ಭದಲ್ಲಿಯೂ ಧಾರ್ಮಿಕ ಬದಲಾವಣೆಗಳ ಬಗ್ಗೆ ಆಗಾಗ ಚರ್ಚೆ ಮಾಡಿ ಹೊಸ ಹೊಸ ಬದಲಾವಣೆಗಳನ್ನು ತರಲಾಗುತ್ತಿತ್ತು. ಧರ್ಮ ಎನ್ನುವುದು ನಿಂತ ನೀರಲ್ಲ. ಹರಿಯುವ ನದಿಯಂತೆ ಎಲ್ಲಾ ಕಾಲಘಟ್ಟದಲ್ಲಿಯೂ ಒಂದೇ ರೀತಿಯಲ್ಲಿ ಇರಲು ಸಾಧ್ಯವಿಲ್ಲ.
ಧರ್ಮಸ್ಥಳದ ವಿಚಾರಕ್ಕೆ ಬಂದರೆ ಶ್ರೀ ಮಂಜುನಾಥ ಸ್ವಾಮಿ ಹಿಂದೂ ದೇವರು ಹೆಗ್ಗಡ ಕುಟುಂಬ ಜೈನರು. ಇದರ ಲಾಭವನ್ನು ಧಾರ್ಮಿಕ ಹಿಂದು ದತ್ತಿ ಕಾಯಿದೆಯಲ್ಲಿ ಸರಕಾರ ವಶಪಡಿಸಿಕೊಳ್ಳಲು ಆಗಲಿಲ್ಲ. ಇದರ ಸಂಪೂರ್ಣ ಲಾಭವನ್ನು ಹೆಗಡೆ ಕುಟುಂಬದವರು ಅನುಭವಿಸಿಕೊಂಡು ಬಂದಿದ್ದಾರೆ.
ಇದರ ವಿರುದ್ಧ ನಿರಂತರವಾಗಿ ಒಂದು ಗುಂಪು ಕೆಲಸ ಮಾಡುತ್ತಾ ಬಂದಿದೆ. ಧರ್ಮಸ್ಥಳದಲ್ಲಿ ಈಗಲೂ ಕೆಲಸಗಾರರು ಕೊಡುವ ಸಂಬಳ ಸರ್ಕಾರಿ ನಿಯಂತ್ರಣದಲ್ಲಿಲ್ಲ. ಎಂಟು ಹತ್ತು ಸಾವಿರಕ್ಕೆ ದುಡಿಯುವ ದಿನಕೂಲಿ ನೌಕರರಂತೆ ಕೆಲಸ ಮಾಡುತ್ತಿದ್ದಾರೆ. ಧರ್ಮಸ್ಥಳ ಎಂದರೆ ಬಿಕ್ಷುಕರೇ ಇಲ್ಲದ ನೆಲೆಬೀಡು. ಹಾಗಾದ್ರೆ ಎಲ್ಲಾ ಕ್ಷೇತ್ರಗಳಲ್ಲೂ ಭಿಕ್ಷುಕರು ಇರುತ್ತಾರೆ. ಧರ್ಮಸ್ಥಳದಲ್ಲಿ ಏಕೆ ಇಲ್ಲ ಎಂದು ಪ್ರಶ್ನಿಸಿದರೆ ಧರ್ಮಸ್ಥಳದಲ್ಲಿ ಭಿಕ್ಷೆ ಬೇಡುವ ಅವಕಾಶವನ್ನು ಆಡಳಿತ ಮಂಡಳಿ ಅಥವಾ ಹೆಗ್ಡೆ
ಕುಟುಂಬ ಅವಕಾಶ ನೀಡುವುದಿಲ್ಲ. ಇಚ್ಛೆ ಬಿಡುವುದನ್ನು ಕಂಡರೆ ಆತನನ್ನು ಧರ್ಮಸ್ಥಳದಿಂದ ಗಡಿ ದಾಟಿಸುತ್ತಾರೆ. ಮತ್ತೆ ಮತ್ತೆ ಬಂದರೆ ಅವನಿಗೆ ಗ್ರಹಾಚಾರ ಕಾದಿದೆ ಅಂತ ಅರ್ಥ. ಹಾಗೆಂದು ಭಿಕ್ಷುಕರೆಲ್ಲ ಕೊಲೆಯಾಗಿದ್ದಾರೆ ಎಂದು ಹೇಳುವುದಕ್ಕೆ ಯಾವ ಮೀಡಿಯಾದವರು ನೋಡಿಲ್ಲ. ಈಗ ನೋಡಿದ್ದೇನೆ ಎಂದು ಬಂದವನಿಗೆ ಸತ್ಯ ಶೋಧನೆಗೆ ಅವಕಾಶ ನೀಡಲಾಗಿತ್ತು. ಆದರೆ ಇದರ ಹಿಂದೆ ಧಾರ್ಮಿಕರು ಮತ್ತು ನಾಸ್ತಿಕರು ಯುದ್ಧ ಮಾಡುವ ಯುದ್ಧಭೂಮಿಯಾಗಿದೆ. ಹಿಂದೆ ರಾಕ್ಷಸರು ಮತ್ತು ದೇವತೆಗಳ ನಡುವೆ ಯುದ್ಧ ಆಗುತ್ತಿತ್ತು ಎಂಬಂತೆ ಈಗ ಒಂದು ಧರ್ಮದ ನಂಬಿಕೆಯ ಬೇರುಗಳನ್ನು ನಾಶ ಮಾಡಲು ಇನ್ನೊಂದು ಧರ್ಮದವರು ಮತ್ತು ನಾಸ್ತಿಕರು ಸೇರಿಕೊಂಡಿದ್ದಾರೆಂದು ಆರೋಪಿಸಲಾಗುತ್ತಿದೆ. ಈ ಪ್ರಪಂಚ ವೆಲ್ಲ ಸ್ವಾರ್ಥಿಗಳ ಸಾಮ್ರಾಜ್ಯ. ಅದರಲ್ಲಿ ವೀರೇಂದ್ರ ಹೆಗಡೆ , ಹರ್ಷೇಂದ್ರ ಹೆಗಡೆ , ತಿಮ್ಮರೋಡಿ ಗಿರೀಶ್ ಮಟ್ಟಣ್ಣನವರ್ , ಯೂಟ್ಯೂಬ್ ಚಾನೆಲ್ ನವರು ರಾಷ್ಟ್ರೀಯ ಸುದ್ದಿವಾಹಿನಿಗಳು ಎಲ್ಲರೂ
ಸೇರಿಕೊಂಡಿದ್ದಾರೆ. ಯಾರಿಗೂ ತಾಳ್ಮೆ ಇಲ್ಲ ನಾನು ಮುಂದೆ ಎನ್ನುವ, ಗೆದ್ದು ಬೀಗುವ, ಹಪಾಹಪಿ. ಸತ್ಯಾಸತ್ಯತೆಯನ್ನು ಕಂಡುಕೊಳ್ಳುವ ಮುನ್ನವೇ ತಾನೇ ಗೆಲ್ಲಬೇಕು ಎನ್ನುವ ಆಕಾಂಕ್ಷೆಯಲ್ಲಿ ಮಾರ್ಗ ತಪ್ಪಿದ ನಡೆಗಳನ್ನು ನಡೆಯಲಾಗುತ್ತಿದೆ. ಸತ್ಯ ಎನ್ನುವುದು ಎಲ್ಲರಿಗೂ ಕಹಿ.
2006 ರವರೆಗೆ ಸ್ಮಶಾನವೇ ಇಲ್ಲದಿದ್ದರೂ, ಧರ್ಮಸ್ಥಳ ಗ್ರಾಮ್ ಪಂಚಾಯ್ತಿಯವರು ಒಂದು ನಿರ್ದಿಷ್ಟ ಸ್ಥಳದಲ್ಲಿ ಹೆಣ ಸುಡುವ ವ್ಯವಸ್ಥೆ ಮಾಡಬೇಕಾಗಿತ್ತು. ಅದನ್ನು ಬಿಟ್ಟು ಯಾವುದೇ ನಿರ್ದಿಷ್ಟ ಸ್ಥಳವಿಲ್ಲದೆ ಹೆಣ ಸಿಕ್ಕಲ್ಲೆ ಮಣ್ಣು ಮಾಡಿದ್ದೇನೆ ಅನ್ನೋದು ಗ್ರಾಮ ಪಂಚಾಯಿತಿಯ ತಪ್ಪಾಗಿದೆ. ಇಂಥ ಚಿಕ್ಕ ಚಿಕ್ಕ ತಪ್ಪುಗಳೆ ಎದುರಾಳಿಗೆ ಅಸ್ತ್ರವಾಗುತ್ತಾ ಬಂದಿದೆ. ದಿನಕ್ಕೆ ನಿರಂತರವಾಗಿ 10 ,20 , ಸಾವಿರ ಭಕ್ತರು ಬರುವ ಸ್ಥಳದಲ್ಲಿ ಸಂಪೂರ್ಣ ವ್ಯವಸ್ಥೆಯನ್ನು ನಿಯಂತ್ರಿಸುವುದು ಅಷ್ಟು ಸುಲಭವಲ್ಲ. ದೇವಸ್ಥಾನದಿಂದ ಲಾಭ ಮಾಡಿಕೊಳ್ಳುತ್ತಿರುವ, ಮತ್ತು ದೇವಸ್ಥಾನದಿಂದ ಉದ್ಯೋಗ ಪಡೆದಿರುವವರು ದೇವಸ್ಥಾನದ ಪರ ಮಾತನಾಡುವುದು ಸಹಜವಾಗಿದೆ. ಎಲ್ಲ ಘಟನೆಗಳ ಹಿಂದೆ ಅನ್ಯಧರ್ಮೀಯನಾದ ಸಮೀರ್ ನ ವಿಡಿಯೋ ಬೆಂಕಿಗೆ ಉಪ್ಪಸುರಿದಂತೆ ಆಗಿದೆ. ಧರ್ಮಸ್ಥಳದಲ್ಲಿ ಭೂಮಾಫಿಯಾ ಮತ್ತು ವಿರೋಧಿಗಳನ್ನು ಹಣೆಯುವ ತಂತ್ರಗಾರಿಕೆಯನ್ನು ಹೆಗ್ಗಡ ಕುಟುಂಬ ಮಾಡಿರುವ ಸಾಧ್ಯತೆಗಳು ಇಲ್ಲ ಎಂದೇನೂ ಇಲ್ಲ. ಒಂದು ಆಡಳಿತ ನಿಯಂತ್ರಣಕ್ಕಾಗಿ ಕೆಲವೊಮ್ಮೆ ಅಂತ ನಿರ್ಣಯಗಳನ್ನು ತೆಗೆದುಕೊಂಡಿರಬಹುದು. ಆದರೆ ಅತ್ಯಾಚಾರ ಕೊಲೆ ಅನಾಚಾರಗಳನ್ನು ಹೆಗಡೆಯ ಕುಟುಂಬ ಮಾಡಿದಿದ್ದಲ್ಲಿ ಧರ್ಮಸ್ಥಳದಲ್ಲಿ ದೇವರು ಇಲ್ಲ. ದೇವರು ಇದ್ದಿದ್ದಲ್ಲಿ ಅಂತ ಘಟನೆಗಳು ನಡೆಯುತ್ತಿರಲಿಲ್ಲ. ಒಂದು ಮಸೀದಿಯಲೋ ಚರ್ಚಿನಲ್ಲೋ ದೇವಸ್ಥಾನದಲ್ಲೊ ಅನಾಚಾರಗಳು ನಡೆಯುತ್ತಿದೆ ಎಂದರೆ ಅಲ್ಲಿ ದೇವರು ಧರ್ಮ ಎರಡು ಇರಲಿಕ್ಕೆ ಸಾಧ್ಯವಿಲ್ಲ. ಇಲ್ಲಿರುವ ಪ್ರಶ್ನೆ ಹಿಂದೂ ಧಾರ್ಮಿಕ ನಂಬಿಕೆಗಳನ್ನು ನಾಶ ಮಾಡುವುದು ಇತರೆ ಧರ್ಮಗಳ ಕೆಲಸವಾಗಿದೆ ಎನ್ನುವುದು. ವರ್ತಮಾನದ ಪರಿಸ್ಥಿತಿಯಲ್ಲಿ ಕ್ರೈಸ್ತ ಧರ್ಮದವರು ಹಿಂದೂ ಧರ್ಮದ ರೀತಿಯಲ್ಲೇ ಭಜನೆಗಳನ್ನು ಕಥೆಗಳನ್ನು ಸೃಷ್ಟಿಸಿ, ಹಿಂದೂ ಧರ್ಮದ ದೇವರುಗಳೆಲ್ಲ ಕಟ್ಟುಕತೆ ಎನ್ನುತ್ತಾ ಹಿಂದುಗಳನ್ನು ಮತಾಂತರ ಮಾಡುವುದು ಹೆಚ್ಚಾಗುತ್ತಿದೆ. ತಮಿಳುನಾಡು ಆಂಧ್ರ ತೆಲಂಗಾಣ ಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಮತಾಂತರದ ಪ್ರಮಾಣ ಕಡಿಮೆ ಇದೆ. ಇದರೊಂದಿಗೆ ಮುಸ್ಲಿಂ ಧರ್ಮದ ಮೂಲಭೂತವಾದಿಗಳು ಪ್ರಪಂಚಕ್ಕೆಲ್ಲ ಒಬ್ಬನೇ ದೇವರು ಎನ್ನುವ ಸಿದ್ಧಾಂತದಲ್ಲಿ ನಮ್ಮ ನಡುವೆ ಬದುಕುತ್ತಿರುವುದು, ಕೆಲವೊಂದು ಬಲತ್ಕಾರಿಕ ಮತಾಂತರಗಳು ನಡೆಯುತ್ತಿರುವುದು ಹಿಂದೂ ಧರ್ಮಕ್ಕೆ ಅಪಾಯ ಎನಿಸಿದೆ. ಈ ಅಪಾಯದ ನೆರಳಿನಲ್ಲಿ ಬದುಕುತ್ತಿರುವ ಹಿಂದುಗಳು ಈಗ ನಡೆಯುತ್ತಿರುವ ಘಟನೆಯನ್ನು ನಮ್ಮ ಇಡೀ ಹಿಂದೂ ಧರ್ಮದ ನಂಬಿಕೆಗಳನ್ನು ನಾಶಮಾಡಲು ನಾಸ್ತಿಕ ವಾದಿಗಳು ಮತ್ತು ಇತರೆ ಧರ್ಮದವರು ಸೇರಿಕೊಂಡು ಕೆಲಸ ಮಾಡುತ್ತಾ ಇದ್ದಾರೆ ಎನ್ನುವ ಭಾವನೆಗೆ ಬಂದಿದ್ದಾರೆ.
ನಮ್ಮ ಧರ್ಮದಲ್ಲಿ ಎಷ್ಟೇ ಲೋಕಗಳಿದ್ದರೂ ನಮ್ಮ ಧರ್ಮದವನೇ ಹೇಳಿದರೆ ಅಷ್ಟೊಂದು ಕೋಪ ಬರುವುದಿಲ್ಲ. ಆದರೆ ಅನ್ಯ ಧರ್ಮೀಯನು ಹೇಳಿದರೆ ಅದರ ಬಣ್ಣ ಬದಲಾಗುತ್ತದೆ. ಮುಸ್ಲಿಂ ಧರ್ಮದಲ್ಲಿ ಮುಸ್ಲಿಂ ಧರ್ಮ ಹುಟ್ಟಿದ ಕಾಲಘಟ್ಟದಲ್ಲಿ ಅಂದಿನ ಸನ್ನಿವೇಶಗಳನ್ನು ಸಾಮಾಜಿಕ ಅವ್ಯವಸ್ಥೆಗಳನ್ನು ನೋಡಿದ ಪೈಗಂಬರವರು ಒಂದಷ್ಟು ಕಟ್ಟು ಪಾಡುಗಳನ್ನು ನಿಯಮಗಳನ್ನು ರೂಪಿಸಿದರು. ಅದನ್ನು ಇವತ್ತಿನವರೆಗೂ ಚಾಚೂ ತಪ್ಪದೇ ಬದಲಾಯಿಸದೆ ಅನುಸರಿಸಿಕೊಂಡು ಬರಲಾಗುತ್ತಿದೆ. ಒಂದು ದೇಶದ ಸಂವಿಧಾನದ ಅಡಿಯಲ್ಲಿ ಬದುಕುತ್ತಿರುವ ಎಲ್ಲರಿಗೂ ಒಂದೇ ಕಾನೂನು .ಹೀಗಿರುವಾಗ ಮುಸ್ಲಿಂ ಕಾನೂನು ಬೇರೆ, ಜೈನರು ಕಾನೂನು ಬೇರೆ , ಕ್ರೈಸ್ತರ ಕಾನೂನು ಬೇರೆ, ಹಿಂದುಗಳಿಗೆ ಬೇರೆ ಎಂದರೆ ಇದು ಧರ್ಮ ಆಧಾರಿತ ದೇಶವಾಗುತ್ತದೆ. ಸಂವಿಧಾನದಲ್ಲಿ ಧರ್ಮ ನಿರಪೇಕ್ಷ ಎನ್ನುವ ಶಬ್ದವನ್ನು ತೆಗೆದು ಜಾತ್ಯಾತೀತ ಪದವನ್ನು ಸೇರಿಸಿದ ಕಾಂಗ್ರೆಸ್ಸಿಗರು ಈಗಲೂ ಸಹ ಬಿಜೆಪಿ ಮೇಲೆ ಸಂವಿಧಾನ ತಿದ್ದುಪಡಿ ಮಾಡುತ್ತೀರಿ ಎಂದು ಗೂಬೆಕೂರಿಸುತ್ತಾರೆ. ಸಂವಿಧಾನವನ್ನು ತಿದ್ದುಪಡಿ ಮಾಡಿದ ಅನುಭವ ಕಾಂಗ್ರೆಸ್ಸಿಗಿದೆ. ಅದಕ್ಕಾಗಿ ಬೇರೆಯವರ ಮೇಲೆ ಹೇಳುತ್ತಾರೆ ತಾನು ಕಳ್ಳ ಪರರನ್ನು ನಂಬಲಾರ ಎಂಬಂತೆ.
ಇತ್ತೀಚಿಗೆ ಸಮಾಜದ ಹೋರಾಟಗಳನ್ನು ಕಂಡಾಗ ಎಲ್ಲಾ ಹೋರಾಟಗಳು ದಾರಿತಪ್ಪಿ ಹೋಗುವುದನ್ನು ಪ್ರಾರಂಭದಲ್ಲಿ ಕಾಣಬಹುದು. ಅದಕ್ಕೆ ಧರ್ಮಸ್ಥಳ ಹೋರಾಟವು ಒಂದಾಗಿದೆ. ಇಲ್ಲಿ ಹೆಗಡೆಯವರ ಕುಟುಂಬದವರು ಅತ್ಯಾಚಾರ ಮಾಡಿದ್ದಾರೆ ಎನ್ನುವುದನ್ನು ಸಾಬೀತು ಮಾಡುವುದಕ್ಕೆ ಮೂಳೆಗಳು ಸಾಕಾಗುವುದಿಲ್ಲ. ಪ್ರತ್ಯಕ್ಷ ಸಾಕ್ಷಿಗಳು ಅಗತ್ಯವಾಗುತ್ತದೆ. ಒಬ್ಬ ಭೀಮನಿಗಿಂತ ಹೆಚ್ಚು ಭೀಮರು ಬೇಕಾಗಿದ್ದಾರೆ. ಹಾಗೇನಾದರೂ ಆದಲ್ಲಿ ಭೀಮನ ಗುಂಪು ಗೆಲ್ಲುತ್ತದೆ. ಹೆಗಡೆ ಅವರ ಸಾಮ್ರಾಜ್ಯದಲ್ಲಿ ತಪ್ಪುಗಳೆ ಇಲ್ಲವಾದರೆ ಹೆಗಡೆಯವರು ಹೆದರುವ ಅಗತ್ಯ ಇಲ್ಲ. ಭಕ್ತರೆಲ್ಲ ಧರ್ಮಸ್ಥಳಕ್ಕೆ ಹೋಗಿ ಆಣೆ ಪ್ರಮಾಣ ಮಾಡುವ ಕ್ಷೇತ್ರದಲ್ಲಿ ಹೆಗಡೆ ಮತ್ತು ಕುಟುಂಬದವರು ಆಣೆ ಪ್ರಮಾಣ ಮಾಡಿ ಹೇಳುವ ಧೈರ್ಯ ತೋರಿಸಬೇಕು. ಆಗ ಸಂಪೂರ್ಣ ಹಿಂದುಗಳು ಹೆಗಡೆಯವರ ಜೊತೆ ನಿಲ್ಲಬಹುದು. ಅಣ್ಣಪ್ಪ ಸ್ವಾಮಿ ಮಂಜುನಾಥ ಇದ್ದಾನೋ ಇಲ್ಲವೋ ಆದರೆ ಹೆಗಡೆ ಮತ್ತು ಕುಟುಂಬದವರು ಸಾರ್ವಜನಿಕವಾಗಿ ನನ್ನ ಕುಟುಂಬದಿಂದ ಯಾವ ಅನಾಚಾರವಾಗಿಲ್ಲ ಎನ್ನುವ ಹೇಳಿಕೆಯನ್ನು ಕೊಡಬೇಕು ಆಗ ವಿರೋಧಿಗಳಾದ ನಾಸ್ತಿಕವಾದಿಗಳನ್ನು, ಕಮ್ಯುನಿಸ್ಟ್ರು ರುಗಳನ್ನು , ಅನ್ಯ ಧರ್ಮೀಯರನ್ನು, ಹೊಸಕಿ ಹಾಕಬಹುದು.
ಆದರೆ ಆ ಧೈರ್ಯವನ್ನು ಕಡೆಯವರಿಗೆ ತೋರಿಸಲು ಆಗುತ್ತಿಲ್ಲ. ಎದುರಾಳಿಗಳು ಈ ದೌರ್ಬಲ್ಯವನ್ನೇ ಕ್ಯಾಶ್ ಮಾಡಿಕೊಳ್ಳುತ್ತಿದ್ದಾರೆ. ತಿಳಿಯ ದೇ ತಪ್ಪುಗಳು ಆಗಿರಬಹುದು, ಆದರೆ ಗಮನಕ್ಕೆ ಬಂದು ತಪ್ಪುಗಳು ನಡೆದಿದ್ದಲ್ಲಿ ಧಾರ್ಮಿಕ ಹಿಂದುಗಳಾಗಿ ಯಾರು ಸಹ ಹೆಗಡೆಯವರ ಪರ ನಿಲ್ಲಲು ಸಾಧ್ಯವಿಲ್ಲ.
ಕ್ರೈಸ್ತರಿಗೆ ಮುಸ್ಲಿಮರಿಗೆ ಹೇಗೋ ಗೊತ್ತಿಲ್ಲ. ಹಿಂದುಗಳಿಗೆ ಸಾಮಾಜಿಕ ನ್ಯಾಯವೇ ಧರ್ಮ ಎನ್ನುವ ಮನಸ್ಥಿತಿಯಲ್ಲಿ ಜನ ಬದುಕುತಿದ್ದಾರೆ. ಹೀಗಾಗಿ ಹಿಂದೂ ಧರ್ಮದಲ್ಲಿ ವೈಚಾರಿಕತೆ ಇದೆ ,ವೈರುಧ್ಯಗಳು ಇದ್ದಾವೆ, ಆತ್ಮ ವಂಚನೆಗಳು ಇದ್ದಾವೆ, ಸತ್ಯ ಆಸತ್ಯಗಳು ಇವೆ.
ಯಾವುದೋ ಧರ್ಮಗುರು ಹೇಳಿದ ಎಂದಾಕ್ಷಣದಲ್ಲಿ ಕುರುಡರಂತೆ ನಂಬುವ ಮನಸ್ಥಿತಿ ಹಿಂದೂ ಧರ್ಮದಲ್ಲಿ ಇಲ್ಲ. ಆದರೆ ಒಂದು ಹೋರಾಟ ಎಂದಾಗ ಒಂದಷ್ಟು ಹಣಕಾಸು ಸಮಯ ಹಾಳಾಗುತ್ತದೆ. ಈ ಸಮಯಕ್ಕೆ ಮತ್ತು ಹಣಕಾಸು ಸಹಾಯಗಳನ್ನು ಹೋರಾಟದ ಹಿನ್ನೆಲೆಯವರಿಗೆ ಯಾರು ಮಾಡಿದ್ದಾರೆ ಎನ್ನುವ ರಹಸ್ಯಗಳು ಹೊರ ಬರಬೇಕಾಗಿದೆ. ಹೆಗಡೆಯವರಿಗೆ ದೇವಸ್ಥಾನದ ಹಣ ಇದೆ. ಆದರೆ ಹೋರಾಟಗಾರರಿಗೆ ನ್ಯಾಯದ ಪರವಾಗಿ ಹೋರಾಡುವ ಶಕ್ತಿಯನ್ನು ಹಿನ್ನೆಲೆಯಲ್ಲಿ ನಿಂತು ನೀಡಿದವರು ಯಾರು ಎನ್ನುವ ಸತ್ಯ ಹೊರ ಬಂದರೆ ನ್ಯಾಯ ನೇತ್ರಾವತಿ ನದಿಯಲ್ಲಿ ನೀರು ಹರಿದಂತೆ ಹರಿದು ಹೋಗುತ್ತದೆ. ಗೆಲ್ಲ ಬೇಕಾಗಿದ್ದು ನ್ಯಾಯ ಸೌಜನ್ಯ ಪದ್ಮಲತಾ ಇನ್ಯಾರ್ಯಾರಿದ್ದಾರೋ ಅವರೆಲ್ಲರ ಸಾವಿಗೂ ನ್ಯಾಯ ಸಿಗಬೇಕು. ಆದರೆ ಭಾರತೀಯ ನ್ಯಾಯ ಸಂಹಿತೆಯಲ್ಲಿರುವ ಕಾನೂನಿನ ಲೋಪದೋಷಗಳ ಲಾಭವನ್ನು ಅಪರಾಧಿಗಳು ಈಗಾಗಲೇ ಪಡೆದುಕೊಂಡಿದ್ದಾರೆ ಎನ್ನುವುದೇ ವಿಪರ್ಯಾಸ.